[go: up one dir, main page]

ವಿಷಯಕ್ಕೆ ಹೋಗು

ಎರಡನೇ ಎಲಿಜಬೆಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಣಿ ಎಲಿಜಬೆಥ್

ಎರಡನೇ ಎಲಿಜಬೆಥ್(ಎಲಿಜಬೆಥ್ ಅಲೆಕ್ಸಾಂಡ್ರ ಮೇರಿ ; ೨೧,ಏಪ್ರಿಲ್ ೧೯೨೬-೮ ಸೆಪ್ಟೆಂಬರ್ ೨೦೨೨) ಯುನೈಟೆಡ್ ಕಿಂಗ್ಡಮ್ ನ ಮಹಾರಾಣಿಯಾಗಿ ೬, ಫೆಬ್ರವರಿ ೧೯೫೨ ರಿಂದ ೮, ಸೆಪ್ಟೆಂಬರ್ ೨೦೨೨ ರಲ್ಲಿ ಮರಣಿಸುವವರೆಗೂ ಅಧಿಕಾರದಲ್ಲಿದ್ದರು.[a] (ಜನನ: ಏಪ್ರಿಲ್ ೨೧, ೧೯೨೬-ಮರಣ: ಸೆಪ್ಟೆಂಬರ್ ೮, ೨೦೨೨[]) ಯುನೈಟೆಡ್ ಕಿಂಗ್‍ಡಮ್ ಮತ್ತು ೧೫ ಇತರ ದೇಶಗಳ ರಾಣಿ. ಈಕೆ ತಂದೆ ಆರನೇ ಜಾರ್ಜ್‍ನ ನಿಧನದ ನಂತರ ಯುನೈಟೆಡ್ ಕಿಂಗ್‌ಡಮ್‌ನ ಪಟ್ಟಕ್ಕೆ ಬಂದು ಜೂನ್ ೨, ೧೯೫೩ರಂದು ಪಟ್ಟಧಾರಣೆ ಮಾಡಿದರು. ಯುನೈಟೆಡ್ ಕಿಂಗ್‌ಡಮ್ ಅಲ್ಲದೆ ಕೆನಡ, ಆಸ್ಟ್ರೇಲಿಯ, ನ್ಯೂ ಜೀಲ್ಯಾಂಡ್, ಜಮೈಕ, ಬಾರ್ಬಡೋಸ್, ಬಹಾಮಾಸ್, ಗ್ರೆನಾಡ, ಪಾಪುಅ ನ್ಯೂ ಗಿನಿ, ಸಾಲೊಮನ್ ದ್ವೀಪಗಳು, ತುವಾಲು, ಸೇಂಟ್ ಲೂಷಿಯ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್, ಬೆಲೀಜ್, ಆಂಟಿಗುವ ಮತ್ತು ಬಾರ್ಬುಡ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್ ರಾಷ್ಟ್ರಗಳ ರಾಣಿ ಕೂಡ. ೫೪ ರಾಷ್ಟ್ರಗಳು ಸದಸ್ಯರಾಗಿರುವ ಕಾಮನ್‌ವೆಲ್ತ್ ಒಕ್ಕೂಟದ ಮುಖಂಡಳು ಈಕೆ. ಇಂಗ್ಲೆಂಡಿನ ಚರ್ಚಿನ ಸುಪ್ರೀಮ್ ಗವರ್ನರ್ ಕೂಡ ಆಗಿರುವರು. ಎಲಿಜಬೆತ್‌ರ ಶಿಕ್ಷಣ ಖಾಸಗಿಯಾಗಿ ಮನೆಯಲ್ಲಿಯೇ ನಡೆಯಿತು. ೧೯೩೬ರಲ್ಲಿ ಆಕೆಯ ತಂದೆ ಆರನೆಯ ಜಾರ್ಜ್ ಆಗಿ ಪಟ್ಟವನ್ನೇರಿದರು. ಎಲಿಜಬೆತ್ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಸಾರ್ವಜನಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ಆಕ್ಸಿಲರಿ ಟೆರಿಟೋರಿಯಲ್ ಸರ್ವೀಸ್‌(Auxiliary Territorial Service) ನಲ್ಲಿಯೂ ಸೇವೆ ಸಲ್ಲಿಸಿದರು. ೧೯೫೨ರಲ್ಲಿ ಆಕೆಯ ತಂದೆ ತೀರಿಹೋದ ನಂತರ ಎಲಿಜಬೆತ್ ಕಾಮನ್‌ವೆಲ್ತ್‌ನ ಮುಖಂಡಳಾಗಿಯೂ, ಎಂಟು ಸ್ವತಂತ್ರ ಕಾಮನ್‌ವೆಲ್ತ್ ರಾಷ್ಟ್ರಗಳಾದ - ಯುನೈಟೆಡ್ ಕಿಂಗ್ಡಮ್, ಕೆನಡ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕ, ಪಾಕಿಸ್ತಾನ್ ಹಾಗೂ ಸಿಲೋನ್- ಗಳ ರಾಣಿಯಾಗಿ ಪಟ್ಟವೇರಿದರು. ೧೯೬೩ರಲ್ಲಿ ಈಕೆಯ ಪಟ್ಟಾಭಿಷೇಕದ ದೂರದರ್ಶನ ಪ್ರಸಾರವೇ ಮೊಟ್ಟ ಮೊದಲನೆಯದು. ಬ್ರಿಟೀಷ್ ರಾಜಮನೆತನದಲ್ಲಿನ ಎರಡನೆಯ ದೀರ್ಘಾವಧಿ ಆಳ್ವಿಕೆ ಎಂದು ಪರಿಗಣಿತವಾಗಿರುವ ೫೯ ವರ್ಷದ ಈಕೆಯ ಆಳ್ವಿಕೆಯಲ್ಲಿ ಇತರೆ ೨೫ ರಾಷ್ಟ್ರಗಳು ಸ್ವತಂತ್ರವಾಗಿ ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದವು. ೧೯೫೨ ರಿಂದ ೧೯೯೨ರ ನಡುವಿನ ಅವಧಿಯಲ್ಲಿ ಇವುಗಳಲ್ಲಿ ಅರ್ಧದಷ್ಟು ರಾಷ್ಟ್ರಗಳು - ದಕ್ಷಿಣ ಆಫ್ರಿಕ, ಪಾಕಿಸ್ತಾನ್, ಸಿಲೋನ್ (ಶ್ರೀಲಂಕ ಎಂದು ಮರುನಾಮಕರಣಗೊಂಡಿತು) ಸೇರಿದಂತೆ - ಗಣರಾಜ್ಯಗಳಾದವು. ೧೯೭೭ ಮತ್ತು ೨೦೦೨ರಲ್ಲಿ ಈಕೆಯ ಆಳ್ವಿಕೆಯ ರಜತ ಹಾಗೂ ಸುವರ್ಣ ಮಹೋತ್ಸವಗಳನ್ನು ಆಚರಿಸಲಾಯ್ತು; ೨೦೧೨ರಲ್ಲಿ ವಜ್ರ ಮಹೋತ್ಸವದ ಆಚರಣೆಗೆ ಸಿದ್ಧತೆಗಳು ಪ್ರಾರಂಭವಾಗಿವೆ. ೧೯೪೭ರಲ್ಲಿ ಈಕೆ ಎಡಿನ್ ಬರೋದ ಡ್ಯೂಕ್ ಪ್ರಿನ್ಸ್ ಫಿಲಿಪ್‌ರನ್ನು ವರಿಸಿದರು. ಇವರಿಗೆ ಚಾರ್ಲ್ಸ್, ಅನ್ನೆ, ಆಂಡ್ರ್ಯು ಹಾಗೂ ಎಡ್ವರ್ಡ್ ಜನಿಸಿದರು. ದಾರುಣ ವರ್ಷ (annus horribilis ) ಎಂದು ಈಕೆ ಕರೆದ ೧೯೯೨ರಲ್ಲಿ ಚಾರ್ಲ್ಸ್ ಹಾಗೂ ಆಂಡ್ರ್ಯು ತಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿದರು, ಅನ್ನೆ ವಿಚ್ಛೇದನ ಪಡೆದರು, ಭೀಕರವಾದ ಬೆಂಕಿಗೆ ವಿಂಡ್ಸರ್ ಕೋಟೆ ಭಾಗಶಃ ಆಹುತಿಯಾಯಿತು. ಚಾರ್ಲ್ಸ್ ಮತ್ತು ವೇಲ್ಸ್‌ನ ರಾಜಕುವರಿ ಡಯಾನ ಮದುವೆಯಲ್ಲೂ ಈ ಸರಣಿ ಮುಂದುವರೆದು ೧೯೯೬ರಲ್ಲಿ ಅವರು ಬೇರೆಯಾದರು. ಮುಂದಿನ ವರ್ಷವೇ ಪ್ಯಾರಿಸಿನ ಕಾರು ಅಪಘಾತದಲ್ಲಿ ಡಯಾನ ಮೃತರಾದರು. ಈ ಸಂದರ್ಭದಲ್ಲಿ ರಾಜಕುಟುಂಬ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ವರ್ತಿಸಿದ ರೀತಿ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ಒಳಗಾಯಿತು. ಆದರೆ ಎಲಿಜಬೆತ್‌ರ ಜನಪ್ರಿಯತೆ ಸಾರ್ವಜನಿಕವಾಗಿ ಆಕೆ ಕಾಣಿಸಿಕೊಂಡ ನಂತರ ಮರುಕಳಿಸಿತು ಮತ್ತು ಇಂದಿಗೂ ಅದು ಎತ್ತರದಲ್ಲಿಯೇ ಇದೆ.

ಬಾಲ್ಯ

[ಬದಲಾಯಿಸಿ]

ಎಲಿಜಬೆತ್ ಯಾರ್ಕ್‌ನ ಡ್ಯುಕ್ (ಅನಂತರ ಆರನೆಯ ಜಾರ್ಜ್) ಆಗಿದ್ದ ಪ್ರಿನ್ಸ್ ಆಲ್ಬರ್ಟ್ ಮತ್ತು ಎಲಿಜಬೆತ್ ದಂಪತಿಗಳ ಮೊದಲ ಮಗು. ಈಕೆಯ ತಂದೆ ಐದನೆಯ ಜಾರ್ಜ್ ಮತ್ತು ರಾಣಿ ಮೇರಿಯರ ಎರಡನೆಯ ಮಗ, ತಾಯಿ ಸ್ಕಾಟಿಶ್ ರಾಜ ಮನೆತನದ ಕ್ಲಾಡ್ ಬೊವೆ ಲಿಯೊನ್‌ರ ಕೊನೆಯ ಮಗಳು. ಲಂಡನ್ನಿನ ೧೭ ಬ್ರಟನ್ ಸ್ಟ್ರೀಟ್, ಮೇಫೇರ್ ವಿಳಾಸದ ತನ್ನ ತಾಯಿಯ ಅಪ್ಪನ ಮನೆಯಲ್ಲಿ ಏಪ್ರಿಲ್ ೨೧, ೧೯೨೬ರಲ್ಲಿ ಬೆಳಗಿನ ೨.೪೦ (ಜಿಎಂಟಿ) ಕ್ಕೆ ಸಿಸೇರಿಯನ್ ಮೂಲಕ ಎಲಿಜಿಜಬೆತ್ ಜನಿಸಿದರು.[] ಅನಂತರ ಬಕ್ಕಿಂಗಾಮ್ ಅರಮನೆಯಲ್ಲಿ ಯಾರ್ಕಿನ ಆರ್ಚ್ ಬಿಷಪ್ ಕಾಸ್ಮೊ ಲ್ಯಾಂಗ್ ರಿಂದ ಮೇ ೨೯ರಂದು ಧರ್ಮದೀಕ್ಷೆ (Baptisation) ಪಡೆದರು.[] ತನ್ನ ತಾಯಿಯ ನೆನಪಿಗೆ ಈಕೆಗೆ ಎಲಿಜಬೆತ್ ಎಂದೂ, ಐದನೆಯ ಜಾರ್ಜ್ ದೊರೆಯ ತಾಯಿಯ(ಈಕೆ ಎಲಿಜಬೆತ್ ಹುಟ್ಟುವ ಆರು ತಿಂಗಳಿಗೆ ಮುನ್ನ ತೀರಿಕೊಂಡಿದ್ದರು) ನೆನಪಿಗೆ ಅಲೆಕ್ಸಾಂಡ್ರ ಎಂದೂ, ತನ್ನ ಅಜ್ಜಿಯ ನೆನಪಿಗೆ ಮೇರಿ ಎಂದೂ ನಾಮಕರಣ ಮಾಡಲ್ಪಟ್ಟರು. [] ಆಕೆಯ ಕುಟುಂಬದ ಆಪ್ತರು ಆಕೆಯನ್ನು “ಲಿಲಿಬೆತ್” ಎಂದು ಕರೆಯುತ್ತಿದ್ದರು.[] ಐದನೆಯ ಜಾರ್ಜ್ ದೊರೆ ತನ್ನ ಮೊಮ್ಮಗಳನ್ನು ತುಂಬಾ ಹಚ್ಚಿಕೊಂಡಿದ್ದರು, ೧೯೨೯ರಲ್ಲಿ ವಿಪರೀತ ಅನಾರೋಗ್ಯ ಪೀಡಿತರಾದಾಗ ಎಲಿಜಬೆತ್ ಭೇಟಿ ಅವರನ್ನು ಉಲ್ಲಸಿತವಾಗಿಡುತ್ತಿತ್ತು, ಅವರು ಗುಣಮುಖರಾಗುವುದಕ್ಕೆ ಮೊಮ್ಮಗಳ ಮೇಲಿನ ಅಕ್ಕರೆಯೂ ಕಾರಣ ಎನ್ನಲಾಗುತ್ತದೆ. []

ಆಲೋಚನಾ ಮಗ್ನಳಾದ ಬೆಳ್ಳಿ ಗುಂಗುರು ಕೂದಲಿನ ಎಲಿಜಬೆತ್
೩ನೇ ವಯಸ್ಸಿನಲ್ಲಿ ರಾಜಕುವರಿ ಎಲಿಜಬೆತ್, 1929

ಎಲಿಜಬೆತ್‌ರ ಏಕೈಕ ಒಡಹುಟ್ಟು ಎಂದರೆ ಆಕೆಗಿಂತ ನಾಲ್ಕು ವರ್ಷಕ್ಕೆ ಚಿಕ್ಕವಳಾದ ಪ್ರಿನ್ಸೆಸ್ ಮಾರ್ಗರೇಟ್. ಇಬ್ಬರು ರಾಜಕುವರಿಯರಿಗೆ ಮನೆಯಲ್ಲಿ ತಾಯಿ ಹಾಗೂ ಗವರ್ನೆಸ್, ಮೆರಿಯನ್ ಕ್ರಾಫೊರ್ಡ್ (“ಕ್ರಾಫೀ” ಎಂದು ಒಮ್ಮೊಮ್ಮೆ ಕರೆಯಲ್ಪಡುವರು) ಉಸ್ತುವಾರಿಯಲ್ಲಿ ವಿದ್ಯಾಭ್ಯಾಸ ಪೂರ್ಣವಾಯಿತು.[] ಮುಂದೆ ಕ್ರಾಫೋರ್ಡ್ ಪ್ರಕಟಿಸಿದ ದಿ ಲಿಟಲ್ ಪ್ರಿನ್ಸೆಸಸ್ ಎನ್ನುವ ಹೆಸರಿನ ಎಲಿಜಬೆತ್ ಮತ್ತು ಮಾರ್ಗರೇಟ್ ಬಾಲ್ಯದ ಜೀವನಚರಿತ್ರೆ ರಾಜಕುಟುಂಬವನ್ನು ಕೆರಳಿಸಿತು.[] ಈ ಪುಸ್ತಕದಲ್ಲಿ ಎಲಿಜಬೆತ್ ವ್ಯವಸ್ಥಿತವಾಗಿ ಇರಲು ಬಯಸುವ, ಜವಾಬ್ದಾರಿಯುತಳಾಗಿ, ಕುದುರೆ ಹಾಗೂ ನಾಯಿಗಳೆಂದರೆ ಅಚ್ಚುಮೆಚ್ಚು ಎನ್ನುವಂತೆ ಚಿತ್ರಿಸಿದ್ದಾರೆ.[] ಇತರರೂ ಇದೇ ಅಭಿಪ್ರಾಯವನ್ನು ಎಲಿಜಬೆತ್ ಕುರಿತು ಹೊಂದಿದ್ದಾರೆ: ಆಕೆಯನ್ನು ಎರಡನೆಯ ವಯಸ್ಸಿನಲ್ಲಿ ಕಂಡ ವಿನ್ಸ್‌ಟನ್ ಚರ್ಚಿಲ್ ಆಕೆಯ ಕುರಿತು “ಒಂದು ವ್ಯಕ್ತಿತ್ವ. ಎಳೆಯ ಪ್ರಾಯದಲ್ಲಿ ಆಕೆಯಲ್ಲಿರುವ ಅಧಿಕಾರಯುತ ನಡವಳಿಕೆ ಹಾಗೂ ಪರ್ಯಾಲೋಚನ ಅಚ್ಚರಿ ಹುಟ್ಟಿಸುವಂಥದ್ದು.” ಎಂದಿದ್ದಾರೆ.[೧೦] ಆಕೆಯ ಕಸಿನ್ ಮಾರ್ಗರೆಟ್ ರೋಡ್ಸ್ ಆಕೆಯನ್ನು ಕುರಿತು ಹೇಳಿದ್ದು ಹೀಗೆ : “ಲವಲವಿಕೆಯ ಪುಟ್ಟ ಹುಡುಗಿ, ಆದರೆ ಮೂಲಭೂತವಾಗಿ ಸೂಕ್ಷ್ಮ ಹಾಗೂ ಉತ್ತಮ ನಡಾವಳಿ ಹೊಂದಿರುವವಳು.”[೧೧]

ಪಟ್ಟಕ್ಕೆ ಉತ್ತರಾಧಿಕಾರಿಯಾಗಿ

[ಬದಲಾಯಿಸಿ]

ರಾಜಕುಟುಂಬದ ಪುರುಷರ ಶ್ರೇಣಿಯಲ್ಲಿನ ಅರಸರ ಮೊಮ್ಮಗಳಾದ್ದರಿಂದ ಹುಟ್ಟಿನಿಂದ ಆಕೆಯನ್ನು ''Her Royal Highness Princess'' Elizabeth of York ಎಂದು ಸಂಬೋಧಿಸಲಾಗುತ್ತಿತ್ತು. ಪಟ್ಟದ ಉತ್ತರಾಧಿಕಾರದ ಶ್ರೇಣಿಯಲ್ಲಿ ತಂದೆ, ದೊಡ್ಡಪ್ಪ- ವೇಲ್ಸ್‌ನ ರಾಜಕುವರ, ಎಡ್ವರ್ಡ್- ನಂತರದಲ್ಲಿದ್ದರು. ಎಲಿಜಬೆತ್‌ರ ಹುಟ್ಟು ಜನರಲ್ಲಿ ಕುತೂಹಲ ಮೂಡಿಸಿತ್ತಾದರೂ ಪಟ್ಟದ ಉತ್ತರಾಧಿಕಾರಿಯಾಗಿ ಆಕೆಯನ್ನು ಯಾರೂ ಪರಿಗಣಿಸಿರಲಿಲ್ಲ. ಆಗಿನ್ನೂ ವೇಲ್ಸ್‌ನ ರಾಜಕುಮಾರ ಎಡ್ವರ್ಡ್ ಯುವಕರಾಗಿದ್ದರು, ಅವರು ಮದುವೆಯಾಗಿ ತಮ್ಮ ಮಕ್ಕಳನ್ನು ಹೊಂದಿ ಪಟ್ಟವನ್ನು ಅಲಂಕರಿಸುವರು ಎಂದೇ ಭಾವಿಸಲಾಗಿತ್ತು.[೧೨] ೧೯೩೬ರಲ್ಲಿ ರಾಜರಾಗಿದ್ದ ಆಕೆಯ ತಾತ ನಿಧನರಾದರು. ಅನಂತರ ದೊಡ್ಡಪ್ಪ ಎಡ್ವರ್ಡ್ ರಾಜರಾಗಿ ಪಟ್ಟವನ್ನೇರಿದರು. ಆಗ ಪಟ್ಟದ ಆಕಾಂಕ್ಷಿಗಳ ಶ್ರೇಣಿಯಲ್ಲಿ ಎಲಿಜಬೆತ್ ತಂದೆಯ ನಂತರದ ಎರಡನೆಯ ಸ್ಥಾನವನ್ನು ಪಡೆದರು. ಅದೇ ವರ್ಷದಲ್ಲಿ ಎಡ್ವರ್ಡ್ ಅಮೇರಿಕಾದ ವಿಚ್ಛೇದಿತೆ ವ್ಯಾಲಿಸ್ ಸಿಂಪ್ಸನ್ ರನ್ನು ಮದುವೆಯಾಗಲು ಮುಂದಾದಾಗ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿ ಪಟ್ಟದಿಂದ ಇಳಿಯಬೇಕಾಯಿತು.[೧೩] ಇದಾದ ತರುವಾಯ ಎಲಿಜಬೆತ್ ತಂದೆ ಪಟ್ಟವನ್ನೇರಿದರು. ಆಗ ಎಲಿಜಬೆತ್ ಪಟ್ಟದ ಉತ್ತರಾಧಿಕಾರಿಯಾದರು ಆಗ ಅವರ ಸಂಬೋಧನೆ Her Royal Highness The Princess Elizabeth ಎಂದಾಗಿತ್ತು. ಎಟನ್ ಕಾಲೇಜಿನ ಹೆನ್ರಿ ಮಾರ್ಟಿನ್‌ರಿಂದ ಎಲಿಜಬೆತ್ ಖಾಸಗಿಯಾಗಿ ಸಾಂವಿಧಾನಿಕ ಇತಿಹಾಸದ ಶಿಕ್ಷಣ ಪಡೆದರು. [೧೪] ಫ್ರೆಂಚ್ ಭಾಷಿಕ ಗವರ್ನೆಸಸ್‌‍ಗಳಿಂದ ಫ್ರೆಂಚ್ ಕಲಿತರು.[೧೫] ಎಲಿಜಬೆತ್ ತನ್ನದೇ ವಯಸ್ಸಿನ ಬಾಲೆಯರೊಂದಿಗೆ ಬೆರೆಯಬೇಕು ಎನ್ನುವುದಕ್ಕೆಂದೇ ಒಂದನೆಯ ಬಕ್ಕಿಂಗಾಮ್ ಅರಮನೆಯ ಕಂಪೆನಿ ಎನ್ನುವ ಗರ್ಲ್ ಗೈಡ್ ಘಟಕವನ್ನು ಪ್ರಾರಂಭಿಸಲಾಯಿತು.[೧೬] ಅನಂತರ ಆಕೆ ಸೀ ರೇಂಜರ್ ಆಗಿ ದಾಖಲಾದರು. ೧೯೩೯ ರಲ್ಲಿ ಎಲಿಜಬೆತ್‌ರ ರಲ್ಲಿ ತಂದೆ ತಾಯಿ ಕೆನಡ ಹಾಗೂ ಅಮೇರಿಕ ಸಂಯುಕ್ತ ಸಂಸ್ಥಾನಗಳ ಪ್ರವಾಸಕ್ಕೆ ಹೊರಟರು. ಎಲಿಜಬೆತ್‌‍ರನ್ನು ಜೊತೆಗೆ ಕರೆದೊಯ್ಯಲಿಲ್ಲ. ಹಿಂದೆ ೧೯೨೭ರಲ್ಲಿ ಅವರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಪ್ರವಾಸ ಹೋದಾಗಲೂ ಸಾರ್ವಜನಿಕ ಪ್ರವಾಸಕ್ಕೆ ಚಿಕ್ಕವಳಾದ ಎಲಿಜಬೆತ್‌ರನ್ನು ಕರೆದೊಯ್ಯುವುದು ಉಚಿತವಲ್ಲ ಎಂದು ಭಾವಿಸಿ ಆಕೆಯನ್ನು ಬ್ರಿಟನ್‌ನಲ್ಲಿಯೇ ಬಿಟ್ಟು ಹೋಗಿದ್ದರು.[೧೭]ಆಕೆಯ ತಂದೆ ತಾಯಿ ತೆರಳುವಾಗ ಎಲಿಜಬೆತ್ “ಕಣ್ಣೀರು ತುಂಬಿಕೊಂಡಂತೆ ಕಂಡಿದ್ದಳು”. [೧೮] ತಾಯಿ ತಂದೆ ಆಕೆಯನ್ನು ನಿಯಮಿತವಾಗಿ ಸಂಪರ್ಕಿಸುತ್ತಿದ್ದರು.[೧೮] ಮೇ ೧೮ರಂದು ಆಕೆ ತನ್ನ ಪೋಷಕರಿಗೆ ಮೊಟ್ಟ ಮೊದಲ ಅಟ್ಲಾಂಟಿಕ್ ಆಚೆಗಿನ ಟೆಲಿಫೋನ್ (royal transatlantic telephone) ಕರೆಯನ್ನು ಮಾಡಿದರು. [೧೭]

ಎರಡನೆಯ ಮಹಾಯುದ್ಧ

[ಬದಲಾಯಿಸಿ]

ಸೆಪ್ಟೆಂಬರ್ ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾದಾಗ ಎಲಿಜಬೆತ್ ಹಾಗೂ ಆಕೆಯ ತಂಗಿ ಮಾರ್ಗರೆಟ್ ಸ್ಕಾಟ್‌ಲ್ಯಾಂಡಿನ ಬಾಲ್ಮೊರಲ್ ಕೋಟೆಯಲ್ಲಿ ೧೯೩೯ರ ಕ್ರಿಸ್ಮಸ್‌ವರೆಗೆ ತಂಗಿದ್ದರು ಅನಂತರ ನೊರ್ಫೋಕ್‌ನ ಸ್ಯಾಂಡ್ರಿಗಾಮ್ ಹೌಸ್‌ಗೆ ಸ್ಥಳಾಂತರಗೊಂಡರು.[೧೯] ೧೯೪೦ರ ಫೆಬ್ರವರಿ ಇಂದ ಮೇ ವರೆಗೆ ಅವರು ವಿಂಡ್ಸರ್‌ನ ರಾಯಲ್ ಲಾಡ್ಜ್‌ನಲ್ಲಿ ವಾಸಿಸಿದರು ಅನಂತರ ವಿಂಡ್ಸರ್ ಕೋಟೆಗೆ ತೆರಳಿದರು, ಅಲ್ಲಿ ಮುಂದಿನ ಐದು ವರ್ಷಗಳ ಕಾಲ ವಾಸವಿದ್ದರು.[೨೦] ಹಿರಿಯ ರಾಜಕಾರಣಿ ಲಾರ್ಡ್ ಹೆಲ್‌ಶಾಮ್ ಇಬ್ಬರು ರಾಜಕುಮಾರಿಯರನ್ನು ಕೆನಡಕ್ಕೆ ಸ್ಥಳಾಂತರಿಸಬೇಕು ಎನ್ನುವ ಸಲಹೆಯನ್ನು ಎಲಿಜಬೆತ್‌ರ ತಾಯಿ ತಳ್ಳಿಹಾಕಿ ಹೀಗೆಂದಿದ್ದರು, “ನಾನಿಲ್ಲದೆ ನನ್ನ ಮಕ್ಕಳು ತೆರಳುವುದಿಲ್ಲ. ನನ್ನ ಪತಿಯಿಲ್ಲದೆ ನಾನು ಹೊರಡುವುದಿಲ್ಲ ಮತ್ತು ರಾಜನು ಎಂದಿಗೂ ಹೊರಡುವುದಿಲ್ಲ.”[೨೧] ವಿಡ್ಸರ್‌ನಲ್ಲಿರುವಾಗ ಮಿಲಿಟರಿ ವಸ್ತ್ರಗಳನ್ನು ಹೊಲಿಯುವುದಕ್ಕೆಂದು ಉಣ್ಣೆಯನ್ನು ಸಂಗ್ರಹಿಸುವ ಕ್ವೀನ್ಸ್ ವೂಲ್ ಫಂಡ್‌ನ ನೆರವಿಗಾಗಿ ರಾಜಕುಮಾರಿಯರು ಪೆಂಟಾಮೈಮ್ ಪ್ರದರ್ಶನವನ್ನು ನೀಡಿದ್ದರು.[೨೨] ೧೯೪೦ರಲ್ಲಿ ಹದಿನಾಲ್ಕರ ಪ್ರಾಯದ ಎಲಿಜಬೆತ್ ಬಿಬಿಸಿಯ ಚಿಲ್ಡ್ರನ್ಸ್ ಅವರ್‌ನಲ್ಲಿ ತನ್ನ ಮೊದಲನೆಯ ರೇಡಿಯೋ ಭಾಷಣವನ್ನು ಮಾಡಿದರು. ಅದರಲ್ಲಿ ನಗರಗಳಿಂದ ತೆರವುಗೊಳಿಸಲ್ಪಟ್ಟ ಮಕ್ಕಳನ್ನು ಉದ್ದೇಶಿಸಿ ಆಕೆ ಹೀಗೆ ಹೇಳಿದ್ದರು.[೨೩] :

ನಮ್ಮ ಶೂರ ನಾವಿಕರು, ಸೈನಿಕರು ಹಾಗೂ ಏರ್‌ಮನ್‌ಗಳಿಗೆ ನಮ್ಮಿಂದಾಗಬಹುದಾದ ಎಲ್ಲ ನೆರವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ, ಮತ್ತು ಈ ಯುದ್ಧದ ಅಪಾಯ ಹಾಗೂ ಬೇಸರಗಳಲ್ಲಿನ ನಮ್ಮ ಪಾಲನ್ನು ಅನುಭವಿಸಲು ಪ್ರಯತ್ನಿಸುತ್ತಿದ್ದೇವೆ. ನಮಗೆ ಗೊತ್ತು, ಪ್ರತಿಯೊಬ್ಬರಿಗೂ ಗೊತ್ತು, ಕಡೆಯಲ್ಲಿ ನಾವು ಕ್ಷೇಮವಾಗಿರುತ್ತೇವೆ.[೨೩]

೧೯೪೩ರಲ್ಲಿ ತನ್ನ ಹದಿನಾರನೆಯ ವಯಸ್ಸಿನಲ್ಲಿ ಎಲಿಜಬೆತ್ ಒಂಟಿಯಾಗಿ ಸಾರ್ವಜನಿಕ ಭೇಟಿಯನ್ನು ನೀಡಿದರು. ಹಿಂದಿನ ವರ್ಷ ತಾವು colonel-in-chief ಆಗಿ ನೇಮಕವಾಗಿದ್ದ ಗ್ರೆನೇಡಿಯರ್ ಗಾರ್ಡ್ಸ್‌ ಗೆ ಅವರು ಭೇಟಿಯಿತ್ತರು. ಫೆಬ್ರವರಿ ೧೯೪೫ರಲ್ಲಿ ಆಕೆ ಆನರರಿ ಸೆಕೆಂಡ್ ಸಬಲ್ಟರ್ನ್ ಆಗಿ women's Auxiliary Territorial Serviceಗೆ ಸೇರಿದರು, ಅವರ ಸರ್ವೀಸ್ ಸಂಖೆ: ೨೩೦೮೭೩. ಆಕೆ ಅಲ್ಲಿ ಡ್ರೈವರ್ ಹಾಗೂ ಮೆಕಾನಿಕ್ ಆಗಿ ತರಬೇತಿ ಪಡೆದರು, ಸೇನೆಯ ಟ್ರಕ್‌ನ್ನು ಓಡಿಸಿದರು, ಐದು ತಿಂಗಳ ತರುವಾಯ ಆನರರಿ ಜ್ಯೂನಿಯರ್ ಕಮಾಂಡರ್ ಆಗಿ ಮೇಲೇರಿಕೆ(ಬಡ್ತಿ) ಪಡೆದರು. ಯುದ್ಧದ ಸಮಯದಲ್ಲಿ ಎಲಿಜಬೆತ್‌ರನ್ನು ವೇಲ್ಸ್ ನೊಂದಿಗೆ ನಿಕಟ ಸಂಪರ್ಕದಲ್ಲಿರುವಂತೆ ಮಾಡಿ ವೆಲ್ಷ್ ರಾಷ್ಟ್ರೀಯ ಹೋರಾಟವನ್ನು ದಮನ ಮಾಡುವ ಯತ್ನ ನಡೆಯಿತು. ವೆಲ್ಷ್ ರಾಜಕಾರಣಿಗಳು ಎಲಿಜಬೆತ್ ಹದಿನೆಂಟು ವರ್ಷದವಳಾದಾಗ ವೇಲ್ಸ್‌ನ ರಾಜಕುಮಾರಿಯಾಗಬೇಕೆಂದು ಕೋರಿದರು. ಈ ಯೋಜನೆಯನ್ನು ಗೃಹ ಕಾರ್ಯದರ್ಶಿ ಹರ್ಬರ್ಟ್ ಮಾರಿಸನ್ ಸಹ ಬೆಂಬಲಿಸಿದರು ಆದರೆ ಬ್ರಿಟನ್ ದೊರೆ ಇದಕ್ಕೆ ನಿರಾಕರಿಸಿದರು. ಈ ಬಗೆಯ ಪದವಿ ವೇಲ್ಸ್‌ನ ರಾಜಕುಮಾರನ ಹೆಂಡತಿಗೆ ಮೀಸಲಾಗಿರುವಂಥದ್ದು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಸಾಮಾನ್ಯವಾಗಿ ದೊರೆಯ ಜೀವಂತ ಹಿರಿಯ ಮಗ ವೇಲ್ಸ್‌ನ ರಾಜಕುಮಾರನಾಗುತ್ತಿದ್ದ ಮತ್ತು ಪಟ್ಟಕ್ಕೆ ಉತ್ತರಾಧಿಕಾರಿಯಾಗಿರುತ್ತಿದ್ದ. ಎಲಿಜಬೆತ್ ಕೇವಲ ಪಟ್ಟದ ಉತ್ತರಾಧಿಕಾರಕ್ಕೆ ಆಕಾಂಕ್ಷಿಯಾಗಿದ್ದವರು, ದೊರೆಗೆ ಗಂಡು ಸಂತಾನವಾದರೆ ಆತ ಉತ್ತರಾಧಿಕಾರವನ್ನು ಆಕ್ರಮಿಸಿಕೊಳ್ಳುತ್ತಿದ್ದ. ೧೯೪೬ರಲ್ಲಿ ವೇಲ್ಸ್‌ನ ನ್ಯಾಶನಲ್ ಈಸ್ಟೆಡ್‌ಫಾಡ್(Eisteddfod)ನಲ್ಲಿ ವೆಲ್ಷ್ ಬಾರ್ಡ್ಸ್‌‍ಗಳ ಗೊರ್ಸೆಡ್‌ ಸದಸ್ಯತ್ವವನ್ನು ನೀಡಲಾಯಿತು. ಬಾರ್ಡ್ಸ್ ಎನ್ನುವವರು ಬ್ರಿಟನ್ನಿನಲ್ಲಿ ರಾಜಾಶ್ರಯದಲ್ಲಿರುವ ಕವಿಗಳು. ಯುರೂಪಿನಲ್ಲಿ ಯುದ್ಧ ಮುಗಿದಾಗ ಯುರೋಪ್ ವಿಜಯದ ದಿನದಂದು ಎಲಿಜಬೆತ್ ಹಾಗೂ ಆಕೆಯ ತಂಗಿ ಅನಾಮಿಕರಾಗಿ ಲಂಡನ್ನಿನ ರಸ್ತೆಯಲ್ಲಿನ ಜಂಗುಳಿಯ ನಡುವೆ ಸೇರಿ ಸಂಭ್ರಮಿಸಿದರು. ಅನಂತರ ಅಪರೂಪದ ಸಂದರ್ಶನವೊಂದರಲ್ಲಿ ಎಲಿಜಬೆತ್ ಈ ಕುರಿತು ಹೇಳಿದ್ದು: “ನಾವು ಹೊರಗೆ ಹೋಗಿ ಕಣ್ಣಾರೆ ನೋಡಬೇಕೆಂದು ನಮ್ಮ ಪೋಷಕರನ್ನು ಕೇಳಿದೆವು. ನನಗೆ ನೆನಪಿದೆ, ನಮ್ಮನ್ನೆಲ್ಲಿ ಗುರುತು ಹಿಡಿಯುವರೋ ಎಂದು ಹೆದರಿದ್ದೆವು.... ಅಪರಿಚಿತ ಜನರ ನಡುವೆ ಕೈ ಕೈ ಹಿಡಿದು ಉದ್ದದ ಸಾಲು ಮಾಡಿಕೊಂಡು ವೈಟ್‌ಹಾಲ್‌ವರೆಗೆ ಸಾಗಿದ್ದು ನೆನಪಿದೆ. ನಾವೆಲ್ಲರೂ ಸಂತೋಷ ಮತ್ತು ನೆಮ್ಮದಿಯ ಅಲೆಯಲ್ಲಿ ತೇಲಿದಂತೆ ಹೋಗುತ್ತಿದ್ದೆವು.” ಎರಡು ವರ್ಷಗಳ ನಂತರ ರಾಜಕುಮಾರಿ ತನ್ನ ಪೋಷಕರೊಂದಿಗೆ ದಕ್ಷಿಣ ಆಫ್ರಿಕಾಗೆ ಪ್ರವಾಸಕ್ಕೆ ತೆರಳಿದರು, ಅದು ಅವರ ಮೊದಲ ಸಾಗರದಾಚೆಯ ಪಯಣವಾಗಿತ್ತು. ಪ್ರವಾಸದಲ್ಲಿರುವಾಗ ಆಕೆಯ ೨೧ನೇ ಹುಟ್ಟುಹಬ್ಬದಲ್ಲಿ ಬ್ರಿಟೀಷ್ ಕಾಮನ್‌ವೆಲ್ತ್‌ ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಹೀಗೆ ಮಾತು ಕೊಟ್ಟರು: “ಇಂದು ನಿಮ್ಮೆದುರು ಘೋಷಿಸುತ್ತಿದ್ದೇನೆ, ನನ್ನ ಇಡೀ ಬದುಕನ್ನು- ಅದು ದೀರ್ಘವಾಗಿರಲಿ ಇಲ್ಲವೇ ಕ್ಲುಪ್ತವಾಗಿರಲಿ- ನಿಮ್ಮ ಸೇವೆಗೆ ಮತ್ತು ನಾವೆಲ್ಲರೂ ಸೇರಿದ ನಮ್ಮ ಶ್ರೇಷ್ಠ ರಾಜಮನೆತನದ ಸೇವೆಗೆ ಮೀಸಲಿಡುತ್ತೇನೆ.”

ಉಲ್ಲೇಖಗಳು

[ಬದಲಾಯಿಸಿ]
  1. https://www.prajavani.net/world-news/britains-queen-elizabeth-ii-dies-970491.html
  2. Brandreth, p. 103; Pimlott, pp. 2–3; Lacey, pp. 75–76; Roberts, p. 74
  3. Hoey, p. 40
  4. Brandreth, p. 103
  5. Pimlott, p. 12
  6. Pimlott, pp. 14–16
  7. Crawford, p. 26; Pimlott, p. 20; Shawcross, p. 21
  8. Brandreth, pp. 108–110; Lacey, pp. 159–161; Pimlott, pp. 20, 163
  9. Brandreth, pp. 108–110
  10. Quoted in Brandreth, p. 105; Lacey, p. 81 and Shawcross, pp. 21–22
  11. Quoted in Brandreth, pp. 105–106
  12. Bond, p. 8; Lacey, p. 76; Pimlott, p. 3
  13. Lacey, pp. 97–98
  14. Brandreth, p. 124; Crawford, p. 85; Lacey, p. 112; Pimlott, p. 51; Shawcross, p. 25
  15. Her Majesty The Queen: Education, Official website of the British Monarchy, retrieved 31 May 2010
  16. Pimlott, p. 47
  17. ೧೭.೦ ೧೭.೧ Pimlott, p. 54
  18. ೧೮.೦ ೧೮.೧ Pimlott, p. 55
  19. Crawford, pp. 104–114; Pimlott, pp. 56–57
  20. Crawford, pp. 114–119; Pimlott, p. 57
  21. Biography of HM Queen Elizabeth the Queen Mother: Activities as Queen, Official website of the British Monarchy, retrieved 28 July 2009
  22. Crawford, pp. 137–141
  23. ೨೩.೦ ೨೩.೧ Archive:Children's Hour: Princess Elizabeth, BBC, 13 October 1940, retrieved 22 July 2009